ಪ್ರಗತಿಪರ ತಿರುವು ಪಡೆದ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ

By :  MA Arun
Update: 2023-03-20 07:50 GMT

ಎಂ ಎ ಅರುಣ್

ಬಸವ ಕಲ್ಯಾಣದಲ್ಲಿ ಇತ್ತೀಚೆಗೆ ನಡೆದ ಲಿಂಗಾಯತ ಮಹಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ವಕೀಲ ಸಿ ಎಸ್ ದ್ವಾರಕಾನಾಥ್ ಅವರು ಪ್ರತ್ಯೇಕ ಧರ್ಮ ಬೇಕಾದರೆ ಲಿಂಗಾಯಿತರು ‘ನಾಗಪುರದ ನಾಗರಹಾವು’ಗಳನ್ನು ದೂರವಿಡಬೇಕೆಂದು ಹೇಳಿದರು.

ಆ ಎರಡು ಪದಗಳು ಕಿವಿಗೆ ಬೀಳುತ್ತಿದಂತೆ, ಅಲ್ಲಿಯವರೆಗೆ ತಣ್ಣಗೆ ಕುಳಿತಿದ್ದ ಪ್ರೇಕ್ಷಕರಲ್ಲಿ ಸಂಚಲನವುಂಟಾಗಿ, ಅವರು ಉತ್ಸಾಹದಿಂದ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ತಮ್ಮ ಒಪ್ಪಿಗೆ ಸೂಚಿಸಿದರು. ಭಾಷಣದ ನಂತರ ಸಮಾವೇಶದಲ್ಲಿದ್ದ ೨೫,೦೦೦ ಸಾವಿರ ಜನರೂ ಆಯೋಜಕರ ಮನವಿಯಂತೆ ಎದ್ದು ನಿಂತು ಮತ್ತೆ ಕರತಾಡನ ಮಾಡಿ ದ್ವಾರಕಾನಾಥ್ ಅವರಿಗೆ ಗೌರವ ಸಲ್ಲಿಸಿದರು.

Read in English: Seeking separate religion, Lingayats return to their radical roots

ಈ ಸಣ್ಣ ಘಟನೆ ಸಮಾವೇಶಕ್ಕೆ ಮುಂಚೆ ಹುಟ್ಟಿಕೊಂಡಿದ್ದ ಒಂದು ದೊಡ್ಡ ವಿವಾದಕ್ಕೆ ಮತ್ತು ಅದನ್ನು ಆಯೋಜಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ (ಜೆಎಲ್‌ಎಂ) ಮೇಲೆ ಬಂದಿದ್ದ ಗಂಭೀರ ಆರೋಪಕ್ಕೆ ತೆರೆ ಎಳೆಯಿತು.

ಸಮಾವೇಶದಲ್ಲಾದ ವಿವಾದ

ಸಮಾವೇಶಕ್ಕೆ ಕೆಲವು ದಿನಗಳಿರಬೇಕಾದರೆ ಜೆಎಲ್‌ಎಂ ಬಿಜೆಪಿಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂಬ ಆರೋಪ ಕೇಳಿಬಂತು. ವಿವಾದವೇಳುತ್ತಿದ್ದಂತಯೇ ಎಡಪಂಥೀಯ ಒಲವು ಹೊಂದಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ಮತ್ತು ಲೇಖಕ ರಂಜಾನ್ ದರ್ಗಾ ಸಮಾವೇಶಕ್ಕೆ ಬರಲು ನಿರಾಕರಿಸಿದರು.

ಈ ಬೇಡದ ವಿವಾದವನ್ನು ಬಿಜೆಪಿಯವರು ಉದ್ದೇಶಪೂರ್ವಕವಾಗಿ ಹುಟ್ಟುಹಾಕಿದರು ಎಂದು ಜೆಎಲ್‌ಎಂ ಕಾರ್ಯಕರ್ತರು ಹೇಳುತ್ತಾರೆ. ಮಾರ್ಚ್ 4-5 ರ ಸಮಾವೇಶವನ್ನು ನಡೆಸಲು ನಾವು ಸಾಕಷ್ಟು ಮುಂಚಿತವಾಗಿ ಸ್ಥಳವನ್ನು ಕಾಯ್ದಿರಿಸಿದ್ದೆವು, ಆದರೆ ಸಮಾವೇಶ ಹತ್ತಿರ ಬರುತ್ತಿದ್ದ ಹಾಗೆ ಬಿಜೆಪಿಯವರು ವಿಜಯ ಸಂಕಲ್ಪ ಯಾತ್ರೆಯನ್ನು ಶುರು ಮಾಡಲು ಅದೇ ಮೈದಾನವನ್ನು ಆಯ್ದುಕೊಂಡರು, ಎನ್ನುತ್ತಾರೆ.

ಮಾರ್ಚ್ ೩ಕ್ಕೆ ಅಮಿತ್ ಶಾ ಮತ್ತು ಯಡಿಯೂರಪ್ಪರನ್ನು ಅಲ್ಲಿಗೆ ಕರೆತಂದು, ಬಿಜೆಪಿಯವರು ಊರ ತುಂಬ ಅಬ್ಬರದ ಪ್ರಚಾರಮಾಡಿ, ಜೆಎಲ್‌ಎಂಗಿಂತ ಜೋರಾಗಿ ತಮ್ಮ ಬಾವುಟ ಮತ್ತು ಬ್ಯಾನರ್ಗಳನ್ನು ಹಾರಿಸಿದರು.

ಬಿಜೆಪಿಯ ವೇದಿಕೆ ನಿರ್ಮಿಸಿದ ಗುತ್ತಿಗೆದಾರನಿಗೇನೇ ಹಣ ನೀಡಿ ತಾವೂ ಕೂಡಾ ಅದನ್ನೇ ಬಳಸಿಕೊಳ್ಳುವ ಅನಿವಾರ್ಯವಾಗಿದ್ದು ಮತ್ತಷ್ಟು ಗೊಂದಲಕ್ಕೆ ಎಡೆಮಾಡಿತು ಎಂದು ಜೆಎಲ್‌ಎಂನವರು ಹೇಳುತ್ತಾರೆ.

“50,000 ಜನರನ್ನು ಸೇರಿಸುವ ವೇದಿಕೆಯನ್ನು ರಾತ್ರೋರಾತ್ರಿ ನಿರ್ಮಿಸಲು ಸಾಧ್ಯವಿಲ್ಲ. ಮದುವೆ ಮಾಡಲು ಛತ್ರವನ್ನು ನಾವು ಕಾಯ್ದಿರಿಸಿದರೆ, ಅದನ್ನು ಬೇರೆ ದಿನಗಳಲ್ಲಿ ಯಾರು ಬಳಸುತ್ತಾರೆ ಎನ್ನುವುದು ನಮ್ಮ ಕೈಮೀರಿದ ವಿಷಯ,” ಜೆಎಲ್‌ಎಂನ ಜಿ ಬಿ ಪಾಟೀಲ್ ಕನ್ನಡ ವೆಬ್ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ತನ್ನ ಲಿಂಗಾಯತ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿ, ತನ್ನ ಕಾರ್ಯಕ್ರಮ ಮತ್ತು ಲಿಂಗಾಯತ ಸಮಾವೇಶ ಒಂದೆಯೇ ಎಂದು ಬಿಂಬಿಸಿ ಸಮುದಾಯವನ್ನು ದಾರಿ ತಪ್ಪಿಸಲು, ಇಷ್ಟೆಲ್ಲಾ ಕಸರತ್ತು ಮಾಡಿತು ಎನ್ನುವುದು ಅನೇಕರ ಅಭಿಪ್ರಾಯ.

ಜೆಎಲ್‌ಎಂ ಮುಖಂಡರ ಪ್ರಕಾರ ಅವರ ಹಾಗೂ ಸಂಘ ಪರಿವಾರದ ನಡುವಿರುವ ಸೈದ್ಧಾಂತಿಕ ಕಂದರವನ್ನು ಮುಚ್ಚಲು ಸಾಧ್ಯವೇ ಇಲ್ಲ, ಸಿಖ್ಖರ ಅಥವಾ ಜೈನರ ಮಾದರಿಯಲ್ಲಿ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತಿರುವ ತಮ್ಮ ಹಾಗೂ ‘ಹಿಂದು’ಗಳನ್ನು ಒಗ್ಗೂಡಿಸಲು ಬಯಸುವ ಸಂಘ ಪರಿವಾರದ ನಡುವೆ ಹೊಂದಾಣಿಕೆ ಎಂದಿಗೂ ಅಸಾಧ್ಯ ಎನ್ನುತ್ತಾರೆ.

ಲಿಂಗಾಯತರ ಪ್ರಗತಿಪರ ಪರಂಪರೆ

ಲಿಂಗಾಯತರು 12ನೇ ಶತಮಾನದಲ್ಲಿ ವೈದಿಕ ಧರ್ಮದ ವಿರುದ್ಧ ಬಂಡಾಯವೆದ್ದ ಬಸವಣ್ಣನ ಅನುಯಾಯಿಗಳು. ತಮ್ಮ ದೇಹದ ಮೇಲೆ ಧರಿಸಿರುವ ‘ಇಷ್ಟಲಿಂಗ’ವನ್ನು ಮಾತ್ರ ಪೂಜಿಸುವ ಏಕದೇವತಾವಾದಿಗಳು. ವೇದ, ಆಗಮಗಳ ಮೇಲೆ ನಂಬಿಕೆಯಿಡದೆ, ತಮ್ಮ ಪೂರ್ವಿಕರು ರಚಿಸಿದ ವಚನಗಳನ್ನು ಪಾಲಿಸುತ್ತಾರೆ .

ದೇವಾಲಯ, ವರ್ಣ ವ್ಯವಸ್ಥೆ, ಜಾತಿ ಭೇದ ,ಮುಂತಾದವುಗಳ ತಿರಸ್ಕರಿಸಿ, ಬದಲಿಗೆ ಜಾತಿ ಮತ್ತು ಲಿಂಗದ ಸಮಾನತೆಯನ್ನು ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ. ತೆರೆದ ಬಾಹುಗಳಿದ್ದ ಬಸವಣ್ಣನ ಆಂದೋಲನವನ್ನು ತುಳಿತಕ್ಕೊಳಗಾದ ಅನೇಕ ಶೋಷಿತ ಸಮುದಾಯಗಳು ಅಪ್ಪಿಕೊಂಡವು. ಇದರಿಂದ ಕೆರಳಿದ ಕಲಚೂರಿ ರಾಜ ಬಿಜ್ಜಳ ಮತ್ತು ಅವನ ವೈದಿಕ ಆಪ್ತರಿಂದ ಕಲ್ಯಾಣ ಕ್ರಾಂತಿಯು ರಕ್ತ ಚೆಲ್ಲಿ ದುರಂತ ಅಂತ್ಯಕಂಡಿತು.

ಇಂದೂ ಕೂಡ, ಕರ್ನಾಟಕ ಮತ್ತು ಇತರೆಡೆಗಳಲ್ಲಿ ಅನೇಕ ಹಿಂದುಳಿದ ಮತ್ತು ದಲಿತ ಜಾತಿಗಳು 12 ನೇ ಶತಮಾನದ ಕ್ರಾಂತಿಯನ್ನು ತಮ್ಮ ಸಮಾಜದ ಸ್ವಂತ ಇತಿಹಾಸವೆಂದು ಗುರುತಿಸುತ್ತವೆ. ಈ ಸಮುದಾಯಗಳಿಂದ ಬಂದ ವಚನಕಾರರನ್ನು ಎಲ್ಲಾ ಲಿಂಗಾಯತರು ಸಾರ್ವತ್ರಿಕವಾಗಿ ಗೌರವಿಸುತ್ತಾರೆ.

ಲಿಂಗಾಯತರು ಎಷ್ಟೇ ಬದಲಾಗಿದ್ದರೂ ಅವರಲ್ಲಿ ತಾವು ವೈದಿಕರಿಗಿಂತ ಭಿನ್ನ ಎಂಬ ವಿಚಾರ ನೆಲೆ ನಿಂತಿದೆ. ಅವರಲ್ಲಿ ಅನೇಕ ವಿಭಿನ್ನ ಆಚರಣೆಗಳು ಗಟ್ಟಿಯಾಗಿ ಇನ್ನೂ ಉಳಿದುಕೊಂಡಿವೆ. ಉದಾಹರಣೆಗೆ, ಲಿಂಗಾಯತರು ತಮ್ಮ ಸತ್ತವರನ್ನು ಹಿಂದೂ ಸ್ಮಶಾನಗಳಿಂದ ಪ್ರತ್ಯೇಕವಾಗಿರುವ ತಮ್ಮದೇ ರುದ್ರಭೂಮಿಯಲ್ಲಿ ಹೂಳುತ್ತಾರೆ.

ಆದರೆ ಶತಮಾನಗಳಿಂದ ಜೊತೆಗಿರುವುದರಿಂದ, ಅನೇಕ ಹಿಂದು ನಂಬಿಕೆಗಳು ಮತ್ತು ಆಚರಣೆಗಳು ಲಿಂಗಾಯತ ಪಂಗಡಗಳಲ್ಲಿ ವಿವಿಧ ಪ್ರಮಾಣದಲ್ಲಿ ನುಸುಳಿವೆ.

ಈ ದೃಷ್ಟಿಯಿಂದ ನೋಡಿದಾಗ ಒಂದು ಕೊನೆಯಲ್ಲಿ ಬಹುಶಃ ಬ್ರಾಹ್ಮಣ ಮೂಲದವರಾದ ಮತ್ತು ವೈದಿಕ ಶೈವಧರ್ಮದ ಬಲವಾದ ಪ್ರಭಾವ ಗೋಚರಿಸುವ ವೀರಶೈವರನ್ನು ಕಾಣುತ್ತೀರಿ. ಮತ್ತೊಂದು ತುದಿಯಲ್ಲಿ ಜೆಎಲ್‌ಎಂನ ಹಿಂದೆಯಿರುವ ವೈವಿಧ್ಯಮಯ, ಕೆಳವರ್ಗದ ಮತ್ತು ತಮ್ಮ ಪರಂಪರೆಯನ್ನು ಹಚ್ಚಿಕೊಂಡಿರುವ ಪಂಗಡಗಳನ್ನು ನೋಡುತ್ತೀರಿ.

ವೀರಶೈವರು ಬಸವಣ್ಣನನ್ನು ತಮ್ಮ ಅನೇಕ ಗುರುಗಳಲ್ಲಿ ಒಬ್ಬರು ಎಂದು ಪರಿಗಣಿಸುತ್ತಾರೆ. ಲಿಂಗಾಯತರ ಪ್ರಯಾಣ ಶುರುವಾಗುವುದೇ ಬಸವಣ್ಣನಿಂದ. ಅವನೊಂದಿಗೆ ಇರುವ ಅವರ ಭಾವನಾತ್ಮಕ ಬಾಂಧವ್ಯವು ಊಹೆಗೂ ನಿಲುಕ್ಕದ್ದು.

ಹಳೆ ಕೂಗಿಗೆ ಹೊಸ ಬಲ

ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ಒಂದು ಶತಮಾನದಷ್ಟು ಹಳೆಯದು. ಆದರೆ ಕಳೆದ ಏಳೆಂಟು ವರ್ಷಗಳಲ್ಲಿ ಭಾರೀ ಬಲ ತುಂಬಿಕೊಂಡಿದೆ.

ಪ್ರತ್ಯೇಕ ಧರ್ಮಕ್ಕಾಗಿ ಲಿಂಗಾಯತರು ಬ್ರಿಟಿಷರ ಕಾಲದಲ್ಲಿ ಎರಡು ದೊಡ್ಡ ಆಂದೋಲನವನ್ನು ನಡೆಸಿದರೂ, ಸ್ವಾತಂತ್ರ್ಯದ ತಕ್ಷಣದಲ್ಲಿ ಮೌನರಾದರು. ರಾಷ್ಟ್ರದಲ್ಲಾದ ಧಾರ್ಮಿಕ ವಿಭಜನೆ ಮತ್ತು ಅದು ಹುಟ್ಟುಹಾಕಿದ ಉಗ್ರ ಹಿಂಸೆಯಿಂದ ಅವರು ಪ್ರತ್ಯೇಕ ಧರ್ಮ ಕೇಳಲು ಹಿಂದೇಟು ಹೊಡೆದರು.

೧೯೮೦ರ ದಶಕದಲ್ಲಿ ಅನೇಕ ಲಿಂಗಾಯತ ಸಂಘಟನೆಗಳ ಮತ್ತು ಮುಖಂಡರ ಚಟುವಟಿಕೆಗಳಿಗೆ ಮತ್ತೆ ಜೀವ ಬಂದು, ಅವರು ಬಸವ ತತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರಾರಂಭಿಸಿದರು.

ಇದೆ ಸಮಯದಲ್ಲಿ ಅಪರಿಮಿತ ವಿದ್ವಾಂಸ ಡಾ. ಕಲ್ಬುರ್ಗಿಯವರ ಸಂಶೋಧನೆಯು ಪ್ರತ್ಯೇಕ ಧರ್ಮ ಚಳುವಳಿಗೆ ಅವಶ್ಯವಾದ ಬೌದ್ಧಿಕ ತಳಹದಿಯನ್ನು ಹಾಕಲು ಶುರುಮಾಡಿತು. ಸಾವಿರಾರು ಶಾಸನಗಳನ್ನು ಮತ್ತು ಪ್ರಾಚೀನ ಕೃತಿಗಳನ್ನು ಪರಿಶೀಲಿಸಿ ಕಲ್ಬುರ್ಗಿಯವರು ಲಿಂಗಾಯತರ ಸಮಗ್ರ ಇತಿಹಾಸವನ್ನು ನಿರ್ಮಿಸಿ, ಅವರ ಪರಂಪರೆಯಲ್ಲಿ ವೈದಿಕ ಧರ್ಮಕ್ಕಿಂತ ಬಿನ್ನವಾಗಿದ್ದ ವೈಶಿಷ್ಟ್ಯತೆ ಮತ್ತು ತೀವ್ರವಾದ ವೈಚಾರಿಕತೆಯನ್ನು ಹೊರತಂದರು.

ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ಪ್ರತ್ಯೇಕ ಧರ್ಮದ ಕೂಗು ಮತ್ತಷ್ಟು ಜೋರಾಯಿತು. ವಾಟ್ಸಾಪ್ ಗುಂಪುಗಳು, ಜೂಮ್ ವಿಡಿಯೋ ಸಭೆಗಳು, ಸಣ್ಣ-ದೊಡ್ಡ ಸಮ್ಮೇಳನಗಳು ಮತ್ತು ಮನೆಗಳಲ್ಲಿ ಪ್ರಾರ್ಥನಾ ಸಭೆಗಳ ಮೂಲಕ ಬಸವ ತತ್ವ ಪ್ರಚಾರ ಮಾಡಲು ನೂರಾರು ಸಣ್ಣ ಸಂಸ್ಥೆಗಳು ಹುಟ್ಟಿಕೊಂಡವು.

ಇಂದು ಕರ್ನಾಟಕದಲ್ಲಿ ಲಿಂಗಾಯತರು ಸಂಘಟಿತರಾಗುತ್ತಿರುವ ವೇಗಕ್ಕೆ ಹತ್ತಿರ ಬರುವ ಬೇರೆ ಯಾವುದೇ ಉದಾಹರಣೆ ಹುಡುಕುವುದು ಕಷ್ಟ. ರಾಜ್ಯದ ವಿವಿಧ ಭಾಗಗಳಲ್ಲಿ ಬಸವತತ್ವದ ಆಧಾರದ ಮೇಲೆ ಸಮ ಸಮಾಜವನ್ನು ಕಟ್ಟುವ ನಿರಂತರ ಪ್ರಯತ್ನ ನಡೆಯುತ್ತಲಿದೆ.

ಡಾ ಕಲಬುರ್ಗಿಯವರ ಕೊಲೆ

೭೭-ವರ್ಷದ ಡಾ. ಕಲಬುರ್ಗಿಯವರ ಕೊಲೆ ಸಮುದಾಯವನ್ನು ಬಡಿದೆಬ್ಬಿಸಿದ ಮತ್ತೊಂದು ಘಟನೆಯಾಗಿ ಪರಿವರ್ತನೆಯಾಯಿತು.

ಲಿಂಗಾಯತ ಹೋರಾಟಗಾರರು ರಾಜ್ಯಾದ್ಯಂತ ಸಂಚರಿಸಿ, ಸಭೆಗಳನ್ನು ಕರೆದು ಕಲ್ಬುರ್ಗಿಯವರ ಸಾಧನೆಯ ಬಗ್ಗೆ ತಿಳಿಸಿ, ಅವರ ದುರಂತ ಅಂತ್ಯವಾದರೂ ಸಮುದಾಯವು ಹೇಗೆ ತಣ್ಣಗೆ ಕುಳಿತಿದೆ ಎಂದು ಎಚ್ಚರಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಮೈಸೂರಿನ ಲಿಂಗಾಯತ ಯುವಕರೊಬ್ಬರು ನಂಜನಗೂಡಿನ ಮಲ್ಲನ ಮೂಲೆ ಮಠದಲ್ಲಿ ನಡೆದ ಇಂತಹ ಸಭೆಯಲ್ಲಿ ಪಾಲ್ಗೊಂಡ ನಂತರ ಆರ್‌ಎಸ್‌ಎಸ್ ತೊರೆದರು. “ಆರ್‌ಎಸ್‌ಎಸ್ ನಲ್ಲಿದ್ದ ನಾನು ಅದರ ಪ್ರಭಾವದಿಂದ ಕಲ್ಬುರ್ಗಿಯವರ ಹತ್ಯೆಯನ್ನು ಹೇಗೆ ಸಂಭ್ರಮಿಸಿದ್ದೆ ಎಂದು ಅರಿವಾಗಿ ಯಾರಲ್ಲೂ ಹೇಳಿಕೊಳ್ಳಲಾಗದ ಯಾತನೆಯಾಯಿತು,” ಎಂದು ಅವರು ಹೇಳುತ್ತಾರೆ.

ಆ ಸಮಯದಲ್ಲಿ ಆರ್‌ಎಸ್‌ಎಸ್ ತೊರೆದ ಸುಮಾರು 40 ಲಿಂಗಾಯತರೊಂದಿಗೆ ಸಂಪರ್ಕ ಬೆಳೆಸಿ, ಅವರ ಜೊತೆ ಸಾಮಾಜಿಕ ಮಾಧ್ಯಮದಲ್ಲಿ ಕೆಲಸಮಾಡಲು ಪ್ರಾರಂಭಿಸಿದರು. ಕಲಬುರ್ಗಿಯವರ ಮೂರನೇ ಪುಣ್ಯಸ್ಮರಣೆಯಂದು ಅವರೆಲ್ಲ ಒಟ್ಟಾಗಿ ತನಿಖೆಯನ್ನು ಚುರುಕುಮಾಡುವಂತೆ ಪೊಲೀಸರನ್ನು ಒತ್ತಾಯಿಸಲು ರಾಷ್ಟ್ರೀಯ ಮಟ್ಟದಲ್ಲಿ ಟ್ವಿಟ್ಟರ್ ಅಲೆಯೆಬ್ಬಿಸಿದರು.

“ಒಬ್ಬ ಕಲ್ಬುರ್ಗಿ ಅಥವಾ ಒಬ್ಬ ಗೌರಿ ಲಂಕೇಶ್‌ರನ್ನು ಕೊಲ್ಲುವುದು ಈಗ ಅಷ್ಟು ಸುಲುಭವಲ್ಲ. ಹಾಗೇನಾದರೂ ಮತ್ತೆ ಆದರೆ ಲಿಂಗಾಯತರು ದಂಗೆ ಏಳುತ್ತಾರೆ,” ಎಂದು ಅವರು ಹೇಳುತ್ತಾರೆ.

“ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಗೆ ದೊಡ್ಡ ಪ್ರತಿರೋಧ ಬರುತ್ತಿರುವುದು ದಿನೇದಿನೇ ಹೆಚ್ಚುತ್ತಿರುವ ಪ್ರಜ್ಞಾವಂತ ಲಿಂಗಾಯತರಿಂದ,” ಎಂದು ಜೆಎಲ್‌ಎಂನ ಮಾಧ್ಯಮ ವಿಭಾಗದಲ್ಲಿರುವ ಜೆ ಎಸ್ ಪಾಟೀಲ್ ಹೇಳುತ್ತಾರೆ.

ರಾಜಕೀಯ ತಿರುವು

2018 ರಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಇಡೀ ರಾಷ್ಟ್ರದ ಗಮನಸೆಳೆಯುವಂತೆ ಇದ್ದಕಿದ್ದಂತೆ ಭುಗಿಲೆದ್ದಿತು.

ಕೆಲವು ಪ್ರಭಾವಿ ಲಿಂಗಾಯತ ಸ್ವಾಮೀಜಿಗಳು ಮತ್ತು ಬಿಜೆಪಿಯೇತರ ರಾಜಕಾರಣಿಗಳು ಜೆಎಲ್‌ಎಂನ್ನು ಹುಟ್ಟುಹಾಕುತ್ತಿದಂತೆ, ಕೈ ಜೋಡಿಸಲು ಬಿಜೆಪಿಯಿಂದ ಲಿಂಗಾಯತ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದ ಕಾಂಗ್ರೆಸ್ ಸರ್ಕಾರವು ಮುಂದೆ ಬಂದಿತು. ಬೇಡಿಕೆಯನ್ನು ಪರಿಶೀಲಿಸಲು ನಾಗಮೋಹನ ದಾಸ್ ಆಯೋಗವನ್ನು ನೇಮಿಸಿ, ಪ್ರತ್ಯೇಕ ಧರ್ಮದ ಪರವಾಗಿದ್ದ ಅದರ ವರದಿ ಬರುತ್ತಿದ್ದ ಹಾಗೆಯೆ ಅದನ್ನು ಕೇಂದ್ರ ಸರ್ಕಾರಕ್ಕೆ ಅನುಮೋದಿಸಿತು.

2018ರ ಕರ್ನಾಟಕದ ಚುನಾವಣೆಯ ಪೂರ್ವ ದಿನಗಳಲ್ಲಿ ಲಿಂಗಾಯತ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಒಂದಾದರಮೇಲೊಂದು ಬೃಹತ್ ರ್ಯಾಲಿಗಳನ್ನು ನಡೆಸಲು ಶುರುಮಾಡಿದವು.

ಪ್ರತ್ಯೇಕ ಧರ್ಮ ಬೇಡಿಕೆಯಲ್ಲಿ ನಂಬಿಕೆಯಿದ್ದ ಪ್ರಭಾವಿ ರಾಜಕಾರಣಿಗಳ ನೆರವಿನಿಂದ ಈ ಚಳುವಳಿಯು ಎಷ್ಟು ಹಠಾತ್ತನೆ ಆವರಿಸಿಕೊಂಡಿತೆಂದರೆ ಸಮಾಜದ ಇತರ ಪಂಗಡಗಳಂತೆ ಅನೇಕ ಲಿಂಗಾಯತರು ಕೂಡ ಆಶ್ಚರ್ಯದಿಂದ ಕಣ್ಣು ಬಿಡುವಂತೆ ಮಾಡಿತು.

ಯಡಿಯೂರಪ್ಪರಂತಹ ಸಮುದಾಯದ ಪ್ರಮುಖ ನಾಯಕರು ಮತ್ತು ಅಖಿಲ ಭಾರತ ವೀರಶೈವ ಮಹಾಸಭಾನಂತಹ ಪ್ರಮುಖ ಸಂಘಟನೆಗಳು ಚಳುವಳಿಯನ್ನು ವಿರೋಧಿಸಿದರು. ಹೋರಾಟಗಾರರು ಹಿಂದೂ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಕಳಂಕವನ್ನೂ ಹೊರಿಸಿದರು.

ಚಳುವಳಿ ಜೋರಾಗಿ ನಡೆದರೂ ಲಿಂಗಾಯತ ಮತಗಳು ಬಿಜೆಪಿಯಲ್ಲೇ ಉಳಿದುಕೊಂಡಿದ್ದರಿಂದ, ಚುನಾವಣೆಯ ನಂತರ ಅದರಲ್ಲಿ ದುಮುಕಿದ್ದ ರಾಜಕಾರಣಿಗಳು ಮೆತ್ತಗೆ ಹಿಂದೆಸರಿದರು. ನಂತರ ಬಂದ ಕೋವಿಡ್ ಮಾರಿ ಯಾವುದೇ ಪ್ರಯಾಣ ಮತ್ತು ಸಭೆಗಳನ್ನು ನಿರ್ಬಂಧಿಸಿದ್ದರಿಂದ ಚಳುವಳಿಯು ಮತ್ತಷ್ಟು ತಣ್ಣಗಾಯಿತು.

ಕಳೆದ ವರ್ಷದಿಂದ ನಿವೃತ್ತ ಐಎಎಸ್ ಅಧಿಕಾರಿ ಎಸ್ ಎಂ ಜಾಮದಾರ್ ನೇತೃತ್ವದಲ್ಲಿ ಜೆಎಲ್‌ಎಂ ಕಾರ್ಯಕರ್ತರು ರಾಜ್ಯದಲ್ಲಿ ಮತ್ತೆ ಓಡಾಡಿ ಜನರನ್ನು ಮುಂದಿನ ಸುತ್ತಿನ ಹೋರಾಟಕ್ಕೆ ಸಜ್ಜುಗೊಳಿಸುವ ಪ್ರಯತ್ನ ಶುರುಮಾಡಿದರು.

ಪ್ರಗತಿಪರ ತಿರುವು

ಅವರ ಶ್ರಮದ ಫಲವೇ ರಾಜಕೀಯ ಪಕ್ಷಗಳನ್ನು ದೂರವಿಟ್ಟು, ಜನರಿಂದ ಹಣ ಪಡೆದು ನಡೆದ ಮಹಾ ಅಧಿವೇಶನ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 40-50,000 ಜನರು ತಮ್ಮ ಖರ್ಚಿನಲ್ಲೇ ಬಂದು ಭಾಗವಹಿಸಿದರು.

ಸಮಾವೇಶದ ವೇದಿಕೆಯಿಂದ ಹೊಮ್ಮಿದ ಬಹುತೇಕ ಸ್ವಾಮೀಜಿಗಳ ಮತ್ತು ಪರಿಣಿತರ ಭಾಷಣದ ತಿರುಳು – 12ನೇ ಶತಮಾನದ ಮೂಲ ಉದ್ದೇಶಕ್ಕೆ ಲಿಂಗಾಯಿತರು ಮರಳಬೇಕು. ಹಿಂದೂ ಧರ್ಮವನ್ನು ತಿರಸ್ಕರಿಸಿ, ಪ್ರತ್ಯೇಕ ಧರ್ಮ ಮತ್ತು ಸಮಾನ ಸಮಾಜಕ್ಕಾಗಿ ಕೆಲಸ ಮಾಡಬೇಕು ಎಂಬುದು.

ಉದಾಹರಣೆಗೆ: ಲಿಂಗಾಯತರು ಜಾತ್ಯತೀತ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಮತ್ತು ತಾವು ಹಿಂದೂಗಳು ಎಂದು ಯೋಚಿಸುವುದನ್ನು ನಿಲ್ಲಿಸಬೇಕು (ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ); ಲಿಂಗಾಯತರು ಹಿಂದುಳಿದ ಜಾತಿಗಳೊಂದಿಗೆ ಅತ್ಯಂತ ಗೌರವ ಮತ್ತು ಪ್ರೀತಿಯಿಂದ ನಡೆದುಕೊಳ್ಳಬೇಕು (ಅಕ್ಕ ಅನ್ನಪೂರ್ಣ ತಾಯಿ); ನಾವೆಲ್ಲರೂ ಲಿಂಗಾಯತರು ೧೨ನೇ ಶತಮಾನದ ಅಸ್ಪೃಶ್ಯರು. ನಾವು ದೇವಾಲಯದ ಪೂಜೆ, ತುಳಸಿ ಪೂಜೆ, ನವಗ್ರಹ ಪೂಜೆ ಮತ್ತು ಯಜ್ಞಗಳಿಂದ ಹೊರಬರಬೇಕು (ನಿಜಗುಣಾನಂದ ಸ್ವಾಮೀಜಿ) ; ದುಡಿಯುವ ವರ್ಗ ಕಟ್ಟಿದ ಲಿಂಗಾಯತ ಧರ್ಮದಿಂದ ಮಾತ್ರ ಕರ್ನಾಟಕದಿಂದ ಜಾತಿಯನ್ನು ತೊಡೆದುಹಾಕಲು ಸಾಧ್ಯ (ದ್ವಾರಕಾನಾಥ್).

ಒಂದು ಧಾರ್ಮಿಕ ಸಭೆಯಲ್ಲಿ, 200 ಸಮುದಾಯದ ಸ್ವಾಮೀಜಿಗಳ ಸಮ್ಮುಖದಲ್ಲಿ, ಜಾಮದಾರ್ ತಮ್ಮ ಸೊಸೆ ಕ್ರಿಶ್ಚಿಯನ್ ಎಂದು ಘೋಷಿಸುವ ಮೂಲಕ ಚಳವಳಿಯ ಮುಕ್ತ ದ್ಯೇಯಗಳಿಗೊಂದು ಒತ್ತು ಕೊಟ್ಟರು.

ಬುದ್ದಿಜೀವಿಗಳಿಗೆ ಸೀಮಿತವಾದ ಚಿಂತನೆ?

ಜೆಎಲ್‌ಎಂ ಮುಖಂಡರು ಹಚ್ಚಿಕೊಂಡಿರುವ ಪ್ರಗತಿಪರ ಧೋರಣೆಯನ್ನು ತಮ್ಮದು ಮೇಲು ಜಾತಿ ಎಂದುಕೊಂಡಿರುವ ಲಿಂಗಾಯತರು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತಾರೆ ಎನ್ನುವುದು ದೊಡ್ಡ ಪ್ರಶ್ನೆ.

ಹೈಕೋರ್ಟ್‌ನ ಪ್ರಮುಖ ವೀರಶೈವ ವಕೀಲರೊಬ್ಬರು ಬಸವ ಕಲ್ಯಾಣದ ಸಭೆಯನ್ನು ಕೆಲವೇ ಬುದ್ಧಿಜೀವಿಗಳಿಗೆ ಸೀಮಿತವಾಗಿರುವ ವೇದಿಕೆ ಎಂದು ವ್ಯಂಗ್ಯವಾಗಿ ಬಣ್ಣಿಸುತ್ತಾರೆ. ಬಹುತೇಕ ಲಿಂಗಾಯತರು ಜಾತಿವಾದ ಮತ್ತು ಹಿಂದೂ ಆಚರಣೆಗಳಲ್ಲಿ ಮುಳುಗಿರುವುದರಿಂದ ಈ ಉತ್ಸಾಹ ತ್ವರಿತವಾಗಿ ಕರಗಿ ಹೋಗುತ್ತದೆ ಎನ್ನುವುದು ಅವರ ತೀರ್ಪು.

ಈ ಟೀಕೆಯನ್ನು ಜಾಮದಾರ್ ತಳ್ಳಿಹಾಕಿ, ಕಳೆದ ಐದು ವರ್ಷಗಳಲ್ಲಿ ಲಿಂಗಾಯತರಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಜಾಗೃತಿ ಬೃಹತ್ತಾಗಿ ಬೆಳೆದಿದೆ ಎಂದು ಹೇಳಿದರು. “ವೇದಿಕೆಯಲ್ಲಿದ್ದ 200 ಸ್ವಾಮೀಜಿಗಳಲ್ಲಿ 16 ಗುರುಗಳು ಹಿಂದುಳಿದ ಮತ್ತು ದಲಿತ ಸಮುದಾಯಗಳಿಗೆ ಸೇರಿದವರು, ಅವರನ್ನು ಯಾರೂ ವಿರೋಧಿಸಲಿಲ್ಲ. ಸಮಾವೇಶಕ್ಕೆ ಹಣ ನೀಡಿದ್ದು ಶ್ರೀಮಂತ, ಮೇಲ್ವರ್ಗದ ಲಿಂಗಾಯತರು. ಅವರಿಗೆ ಇದರ ಬಗ್ಗೆ ಯಾವುದೇ ಸಮಸ್ಯೆ ಇಲ್ಲ,’’ ಎಂದು ವಿವರಿಸಿದರು.

2018ರ ಕಾಂಗ್ರೆಸ್ ಪ್ರಾಯೋಜಿತ ಆಂದೋಲನವು ಮತಗಳನ್ನು ಹಸ್ತಾಂತರಿಸುವಲ್ಲಿ ವಿಫಲವಾಗಿದ್ದಿರಬಹುದು, ಆದರೆ ಅದು ಹುಟ್ಟುಹಾಕಿದ ಅಬ್ಬರದ ಪ್ರಚಾರವು ಲಿಂಗಾಯತರಲ್ಲಿ ಅವರ ಇತಿಹಾಸ, ಪರಂಪರೆ ಮತ್ತು ಅಸ್ಮಿತೆಯ ಬಗ್ಗೆ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಿರುವ ಹಾಗೆ ಕಾಣುತ್ತದೆ.

ಲಿಂಗಾಯತರಲ್ಲಿ ಆಗುತ್ತಿರುವ ಬದಲಾವಣೆಗಳು

ಲಿಂಗಾಯತ ಸಮಾಜದಲ್ಲಿ ಉಂಟಾಗುತ್ತಿರುವ ವ್ಯಾಪಕವಾದ ವೈಚಾರಿಕ ಬದಲಾವಣೆಗಳನ್ನು ತೋರಿಸಲು ಜೆಎಲ್‌ಎಂನವರು ಅನೇಕ ಉದಾಹರಣೆಗಳನ್ನು ನೀಡುತ್ತಾರೆ.

ಓಬೀರಾಯನ ಕಾಲದಿಂದಲೂ ಬಂದಿದ್ದ ಸ್ವಾಮೀಜಿಗಳನ್ನು ಭಕ್ತಾದಿಗಳು ಹೊತ್ತೊಯ್ಯುವ ಅಡ್ಡಪಲ್ಲಕ್ಕಿ ಉತ್ಸವಗಳು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಇಳಿದಿವೆ. ”ಐದು ವರ್ಷಗಳ ಹಿಂದೆ ನೂರಾರು ಕಡೆ ಈ ಪದ್ಧತಿ ಚಾಲ್ತಿಯಲ್ಲಿತ್ತು. ಈಗ ಇದು ಬೆರಳೆಣಿಕೆಯ ಊರುಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದೆ,” ಎಂದು ಜಾಮದಾರ್ ಹೇಳುತ್ತಾರೆ. ಸ್ವಾಮೀಜಿಗಳು ಈಗ ಪಲ್ಲಕ್ಕಿಗಳಿಂದ ಇಳಿದು ಅದರ ಪಕ್ಕದಲ್ಲೇ ನಡೆಯುವುದನ್ನು ಸಾಮಾನ್ಯವಾಗಿ ನೋಡಬಹುದು. ಕೆಲವು ಕಡೆ ಸ್ವಾಮೀಜಿಗಳು ಹಳೆ ಪದ್ಧತಿಗೆ ಹಠಹಿಡಿದಾಗ, ಬಸವ ಭಕ್ತರು ಅವರನ್ನು ಕೆಳಗಿಳಿಸಿ ನಡೆಯುವಂತೆ ಮಾಡಿದರು.

ಸಪ್ತಪದಿಯಂಥ ವೈದಿಕ ಆಚರಣೆಗಳನ್ನು ಲಿಂಗಾಯತ ಮದುವೆಗಳು ಎಂದಿಗೂ ಒಪ್ಪಿಕೊಂಡಿಲ್ಲದಿದ್ದರೂ, ಈಗ ಅವು ಮತ್ತಷ್ಟು ಬದಲಾಗುತ್ತಿವೆಯಂತೆ. ನಿಧಾನವಾಗಿ ಸಂಸ್ಕೃತದ ಬದಲು ಕನ್ನಡ, ಮಂತ್ರಗಳ ಬದಲಿಗೆ ವಚನಗಳ ಬಳಕೆ ಹೆಚ್ಚಾಗುತ್ತಿದೆ. “ವಧು-ವರರು ತಾಳಿಯ ಬದಲು ಷಟ್ಸ್ಥಲ ಪದಕಗಳನ್ನು ಪರಸ್ಪರ ಕಟ್ಟುತ್ತಿದ್ದಾರೆ, ಇವರಲ್ಲಿ ಮೊದಲು ಪದಕ ಕಟ್ಟುವುದು ವಧುವು. ಹೆಚ್ಚೆಚ್ಚು ಲಿಂಗಾಯತರು ಅಂತರ್ಪಂಗಡ ಮತ್ತು ಅಂತರ್ಜಾತಿ ವಿವಾಹವಾಗುತ್ತಿದ್ದಾರೆ,” ಎಂದು ಜೆ ಎಸ್ ಪಾಟೀಲ್ ಹೇಳುತ್ತಾರೆ. ಷಟ್ಸ್ಥಲ ಅಥವಾ ಆರು ಹಂತಗಳು, ಲಿಂಗಾಯತ ಚಿಂತನೆಯಲ್ಲಿ ಕಂಡುಬರುವ, ಭಕ್ತರ ಆಧ್ಯಾತ್ಮಿಕ ಪ್ರಗತಿಯನ್ನು ಸೂಚಿಸುವ, ಮುಖ್ಯ ತಾತ್ವಿಕ ಪರಿಕಲ್ಪನೆ.

ಜಾತಿವಾದ ಬಿಡದ ಲಿಂಗಾಯತರು

ಎಲ್ಲಾ ಲಿಂಗಾಯತರು ಜೆಎಲ್‌ಎಂನ ಆದರ್ಶವಾದವನ್ನು ಒಂದೇ ಉಸಿರಿನಲ್ಲಿ ಒಪ್ಪಿಕೊಳ್ಳುವುದಿಲ್ಲ ಎಂಬ ಅಭಿಪ್ರಾಯ ಸಾಮಾನ್ಯವಾಗಿ ಕಂಡುಬರುತ್ತದೆ.

ಲಿಂಗಾಯತ ಚಳವಳಿಯು ಕರ್ನಾಟಕದ ಉತ್ತರದ ತುದಿಯಲ್ಲಿರುವ ಬಸವ ಕಲ್ಯಾಣದಲ್ಲಿ ಪ್ರಾರಂಭವಾಗಿ, ಕ್ರಮೇಣ ವಿವಿಧ ದಿಕ್ಕುಗಳಲ್ಲಿ ಹರಡಿತು. ಮಧ್ಯ ಮತ್ತು ದಕ್ಷಿಣ ಕರ್ನಾಟಕದ ಕಡೆಗೆ ಅದು ಸಾಗಿದಂತೆ, ದಾರಿಯುದ್ದಕ್ಕೂ ಅಪಾರ ಹಿಂಬಾಲಕರನ್ನು ಪಡೆದುಕೊಂಡಿತು.

ಆದರೆ ದಕ್ಷಿಣ ದಿಕ್ಕಿನಲ್ಲಿ ದೂರ ಸಾಗಿದಷ್ಟೂ ಚಳುವಳಿಯು ತನ್ನ ಸೈದ್ಧಾಂತಿಕ ಬಿಗಿಯನ್ನು ಕಳೆದುಕೊಳ್ಳುತ್ತಾ ಹೋಯಿತು ಮತ್ತು ಹಿಂದೂ ಧರ್ಮದ ಪ್ರಭಾವವು ಹೆಚ್ಚು ಗಾಢವಾಗಲು ಶುರುವಾಯಿತು. ದಕ್ಷಿಣ ಕರ್ನಾಟಕದ ಹಳೆಯ ಮೈಸೂರು ಭಾಗದಲ್ಲಿ ವೈದಿಕ ಶೈವಮತದ ಪ್ರಭಾವವು ಪ್ರಬಲವಾಗಿ, ಅಲ್ಲಿನ ಲಿಂಗಾಯತರಲ್ಲಿ ಜಾತೀಯತೆ ಎದ್ದು ಕಾಣುತ್ತದೆ.

ಯುವ ಲಿಂಗಾಯತ ಸ್ವಾಮೀಜಿಯೊಬ್ಬರು ಉತ್ತರ ಕರ್ನಾಟಕದ ಲಿಂಗಾಯತರಲ್ಲಿಯೂ ಜಾತೀಯತೆ ಸಾಕಷ್ಟಿದೆ ಎನ್ನುತ್ತಾರೆ. “ಉತ್ತರ ಕರ್ನಾಟಕದ ಲಿಂಗಾಯತ ಸಂಸ್ಥೆಗಳು ತಮ್ಮ ಉಪಜಾತಿಯವರನ್ನು ಮಾತ್ರ ಕೆಲಸಕ್ಕೆ ನೇಮಿಸಿಕೊಳ್ಳುತ್ತವೆ. ಸಮಾವೇಶದಲ್ಲಿ 16 ಹಿಂದುಳಿದ ಮತ್ತು ದಲಿತ ಸ್ವಾಮೀಜಿಗಳನ್ನು ವೇದಿಕೆಗೆ ಕರೆತಂದುದ್ದು ಜೆಎಲ್‌ಎಂ ನಾಯಕತ್ವದ ವೈಯಕ್ತಿಕ ನಡೆ. ಎಲ್ಲೆಡೆ ಲಿಂಗಾಯತರು ಅದನ್ನು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ, ” ಎನ್ನುತ್ತಾರೆ ಅವರು.

ಲಿಂಗಾಯತ ಸಮಾಜದಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಜೆಎಲ್‌ಎಂ ಮಾಡಬೇಕಾಗಿರುವ ಕೆಲಸ ಬಹಳಷ್ಟಿದೆ ಎಂದು ಜಾಮದಾರ್ ಒಪ್ಪಿಕೊಳ್ಳುತ್ತಾರೆ. “ಶತಮಾನಗಳಿಂದ ಧೋರಣೆಗಳು ಹೆಪ್ಪುಗಟ್ಟಿವೆ, ರಾತ್ರೋರಾತ್ರಿ ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ,” ಎಂದು ಅವರು ಹೇಳುತ್ತಾರೆ.

ಲಿಂಗಾಯತರು vs ವೀರಶೈವರು

ಲಿಂಗಾಯತ ಸಮುದಾಯದ ಎಲ್ಲಾ ಪಂಗಡಗಳು ಒಗ್ಗೂಡಿದರೆ ಪ್ರತ್ಯೇಕ ಧರ್ಮದ ಕೂಗಿಗೆ ಹೆಚ್ಚಿನ ಬಲ ಬರುತ್ತದೆ. ಆದರೆ ಸದ್ಯಕ್ಕೆ ಆ ಐಕ್ಯತೆಯ ಯಾವುದೆ ಸಾಧ್ಯತೆ ಕಾಣುತಿಲ್ಲ.

ಸಮುದಾಯವನ್ನು ಪ್ರತಿನಿಧಿಸಲು ಯತ್ನಿಸುತ್ತಿರುವ ಜೆಎಲ್‌ಎಂ ಮತ್ತು ಮತ್ತೊಂದು ಪ್ರಭಾವಿ ಸಂಘಟನೆಯಾದ ಅಖಿಲ ಭಾರತ ವೀರಶೈವ ಮಹಾಸಭಾಗಳ ನಡುವಿನ ಬಿಕ್ಕಟ್ಟು ವಿಷಮವಾಗುತ್ತಿದೆ.

ವೀರಶೈವ ಮಹಾಸಭಾ ವೀರಶೈವರು ಮತ್ತು ಲಿಂಗಾಯತರಿಬ್ಬರಿಗೂ ಪ್ರತ್ಯೇಕ ಧರ್ಮದ ಸ್ಥಾನ ಬೇಕೆಂದು ಕೇಳುತ್ತದೆ. ಆದರೆ ಶೈವ ಹಿಂದೂಗಳಂತೆ ಇರುವ ವೀರಶೈವರನ್ನು ಸೇರಿಸಿಕೊಂಡರೆ, ಯಾವ ಸರ್ಕಾರವೊ ತಮ್ಮ ಬೇಡಿಕೆಯನ್ನು ಒಪ್ಪವುದಿಲ್ಲ ಎಂದು ಜೆಎಲ್‌ಎಂ ವಾದಿಸುತ್ತದೆ.

ಎಲ್ಲ ಪಕ್ಷಗಳ ಪ್ರಭಾವಿ ನಾಯಕರನ್ನು ಹೊಂದಿರುವ ವೀರಶೈವ ಮಹಾಸಭಾಕ್ಕೆ ಅಧಿಕಾರವೇ ಮುಖ್ಯಗುರಿ ಎನ್ನುವುದು ಜೆಎಲ್‌ಎಂನ ಟೀಕೆ. “ಬಸವ ಪ್ರಜ್ಞೆಯನ್ನು ಹರಡಲು ನಾವು ಜನರೊಂದಿಗೆ ಕೆಲಸ ಮಾಡುತ್ತೇವೆ. ಟಿಕೆಟ್ ಪಡೆಯಲು ಅವರು ಪಕ್ಷಗಳೊಂದಿಗೆ ಕೆಲಸ ಮಾಡುತ್ತಾರೆ,” ಎಂದು ಜೆ ಎಸ್ ಪಾಟೀಲ್ ಹೇಳುತ್ತಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯ ವೀರಶೈವ ಮಹಾಸಭಾ ನಾಯಕರೊಬ್ಬರು ಜಾಮದಾರ್ ಅವರನ್ನು ಏಕವಚನದಲ್ಲಿ ನಿಂದಿಸಿದರು . ವೈದಿಕ ಹಿಂದೂಗಳಿಗಿಂತ ವೀರಶೈವರು ಹೆಚ್ಚು ಅಪಾಯಕಾರಿ ಎಂದು ಜೆಎಲ್‌ಎಂ ಮುಖಂಡರು ಹೇಳುತ್ತಾರೆ.

ಜೆಎಲ್‌ಎಂ ಐದು ಹಳೆಯ ಮತ್ತು ಪ್ರಭಾವೀ ಲಿಂಗಾಯತ ಸಂಘಟನೆಗಳ ಸಹಭಾಗಿತ್ವದಲ್ಲಿ ಬಸವ ಕಲ್ಯಾಣ ಸಮಾವೇಶವನ್ನು ಆಯೋಜಿಸಿತ್ತು. ವೇಗವಾಗಿ ಬೆಳೆಯುತ್ತಿರುವ ಸದಸ್ಯತ್ವ ಮತ್ತು ಸಕ್ರಿಯ ಚಟುವಟಿಕೆಗಳನ್ನು ಹಮ್ಮಿಕೊಂಡಿರುವ ಜೆಎಲ್‌ಎಂ ವೀರಶೈವ ಮಹಾಸಭಾದ ಮೇಲೆ ಮುನ್ನಡೆ ಸಾಧಿಸುತ್ತಿರುವಂತೆ ತೋರುತ್ತಿದೆ.

ಮೀಸಲಾತಿ ಆಂದೋಲನದ ಸವಾಲು

ಪ್ರತ್ಯೇಕ ಲಿಂಗಾಯತ ಪಂಗಡಗಳು, ವಿಶೇಷವಾಗಿ ಪಂಚಮಸಾಲಿಗಳು, ಮೀಸಲಾತಿಗಾಗಿ ನಡೆಸುತ್ತಿರುವ ಆಂದೋಲನ ಸಮುದಾಯವನ್ನು ಇನ್ನೂ ಒಡೆಯುವ ರೀತಿ ಬೆಳೆಯುತ್ತಿದೆ .

ತಮ್ಮ ಹೋರಾಟದ ಹಾದಿಯಲ್ಲಿ ಪಂಚಮಸಾಲಿಗಳು ಲಿಂಗಾಯತ ಸಮುದಾಯದಲ್ಲಿರುವ ತಮ್ಮ ಪ್ರತ್ಯೇಕ ಸ್ಥಾನಮಾನ ಮತ್ತು ಅಸ್ಮಿತೆಗೆ ಒತ್ತು ಕೊಡುತ್ತಿದ್ದಾರೆ.

ನಾವು ಯಾರ ಮೀಸಲಾತಿ ಬೇಡಿಕೆಯ ಪರವಾಗಿಯೂ ಇಲ್ಲ ಅಥವಾ ವಿರುದ್ಧವಾಗಿಯೂ ಇಲ್ಲ. ಲಿಂಗಾಯತರನ್ನು ಒಗ್ಗೂಡಿಸುವುದು ನಮ್ಮ ಉದ್ದೇಶ, ಎಂದು ಪಂಚಮಸಾಲಿಗಳನ್ನು ಹೆಸರಿಸದೆ ಜಮಾದಾರ್ ಹೇಳುತ್ತಾರೆ.

ಪ್ರಭಾವಿ ಪಂಚಮಸಾಲಿ ಜಯಮೃತ್ಯುಂಜಯ ಸ್ವಾಮಿಗಳಿಗೆ ಆಹ್ವಾನವಿದ್ದರೂ, ಅವರು ಸಮಾವೇಶದಲ್ಲಿ ಕಾಣಿಸಕೊಳ್ಳಲ್ಲಿಲ್ಲ .

ಲಿಂಗಾಯತರ ಅಸ್ತಿತ್ವದ ಪ್ರಶ್ನೆ

ಪ್ರತ್ಯೇಕ ಧರ್ಮದ ಬೇಡಿಕೆ ನೆಪಮಾತ್ರಕಲ್ಲಾ, ಅದು ಲಿಂಗಾಯತರ ಅಸ್ತಿತ್ವದ ಪ್ರಶ್ನೆಯೆಂದು ಜೆಎಲ್‌ಎಂನ ಅಭಿಪ್ರಾಯ. ಕಳೆದ ಕೆಲವು ದಶಕಗಳಲ್ಲಿ ನಡೆದಿರುವ ವಿವಿಧ ಜಾತಿ ಗಣತಿಗಳಲ್ಲಿ ಲಿಂಗಾಯತರಾಗಿ ನೋಂದಾಯಿಸಿಕೊಳ್ಳುತ್ತಿರುವವರ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ.

1975ರ ಹಾವನೂರ್ ಆಯೋಗದ ಪ್ರಕಾರ ಕರ್ನಾಟಕದ ಜನಸಂಖ್ಯೆಯಲ್ಲಿ ಶೇಕಡ 18ರಷ್ಟು ಲಿಂಗಾಯತರಿದ್ದರು. ಕಾಂಗ್ರೆಸ್ ಸರ್ಕಾರವು ನಿಯೋಜಿಸಿದ 2015 ರ ಜಾತಿ ಗಣತಿಯಲ್ಲಿ ಈ ಸಂಖ್ಯೆ ಕೇವಲ ಶೇಕಡ 9ಕ್ಕೆ ಕುಸಿದಿದೆ ಎಂದು ವರದಿಯಾಗಿದೆ.

ಜೆಎಲ್‌ಎಂನ ಪ್ರಕಾರ ಅನೇಕ ಸ್ವಾಮೀಜಿಗಳು 18 ಲಿಂಗಾಯತ ಉಪಜಾತಿಗಳಿಗೆ ಅವರು ಹಿಂದೂಗಳಾಗಿ ನೋಂದಾಯಿಸದಿದ್ದರೆ ಮೀಸಲಾತಿ ಕಳೆದುಹೋಗುತ್ತದೆ ಎಂದು ದಾರಿ ತಪ್ಪಿಸುತ್ತಿದ್ದಾರೆ. ಆದ್ದರಿಂದ, ಅನೇಕ ಪಂಗಡಗಳು, ಉದಾಹರಣೆಗೆ, ಲಿಂಗಾಯತ-ಸಾಧು ಮತ್ತು ಲಿಂಗಾಯತ-ಬಣಜಿಗ ಬದಲಿಗೆ ಹಿಂದೂ-ಸಾಧು ಮತ್ತು ಹಿಂದೂ-ಬಣಜಿಗ ಎಂದು ನೋಂದಾಯಿಸುತ್ತಿದ್ದಾರೆ.

ಈ ತಪ್ಪುಕಲ್ಪನೆಯನ್ನು ಸರಿಪಡಿಸುವುದು ನಮ್ಮ ಮುಂದಿನ ಕೆಲಸ ಎಂದು ಜೆಎಲ್‌ಎಂ ಮುಖಂಡರು ಹೇಳುತ್ತಾರೆ. “ಭಾರತದಲ್ಲಿ ಮೀಸಲಾತಿ ಸಿಗುವುದು ಜಾತಿಗಳಿಗಲ್ಲ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ,” ಎಂದು ಜಾಮದಾರ್ ಹೇಳುತ್ತಾರೆ.

ಕ್ಷುಲ್ಲಕ ಬೆದರಿಕೆ ಅಥವಾ ಆಮಿಷಗಳ ಮೂಲಕ ಲಿಂಗಾಯತರು ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುವಂತೆ ಮಾಡುವುದು ಎಷ್ಟು ಸುಲಭವೆನ್ನುವುದು ಇಲ್ಲಿ ಮುಖ್ಯವಾದ ವಿಷಯ ಎನ್ನುವುದು ಜೆಎಲ್‌ಎಂನ ಅಭಿಪ್ರಾಯ.

ಲಿಂಗಾಯತರ ಅಸ್ಮಿತೆಯನ್ನು ಉಳಿಸಬೇಕಾದರೆ ಪ್ರತ್ಯೇಕ ಧರ್ಮಬಿಟ್ಟರೆ ಬೇರೆ ದಾರಿಯೇ ಇಲ್ಲ,” ಎಂದು ಜಾಮದಾರ್ ಹೇಳುತ್ತಾರೆ.

Read in English: Seeking separate religion, Lingayats return to their radical roots

Tags:    

Similar News