ಸಿದ್ದರಾಮಯ್ಯ ಸರ್ಕಾರಕ್ಕೆ ಕನ್ನಡ ಅಸ್ಮಿತೆಯ ರಾಜಕಾರಣದ ಸವಾಲು

Update: 2023-06-26 12:34 GMT
Chief Minister Siddaramaiah, who also oversees the finance portfolio, stated that the state government will fully bear the insurance premium I File Photo : ANI

Issues related to pride of Kannada and Kannadigas are plenty. Kannadigas are pinning their hopes on the new Congress government headed by Siddaramaiah, who was the first chairman of the Kannada Surveillance Committee (Kannada Kaavalu Samithi), to address these issues. Representative bodies of Kannada have already submitted their list of demands to the Chief Minister.

ಭಾಷಾವಾರು ಪ್ರಾಂತಗಳ ರಚನೆ ಪ್ರಕ್ರಿಯೆಯ ಭಾಗವವಾಗಿ ಹರಿದು ಹಂಚಿಹೋಗಿದ್ದ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ, ಮೈಸೂರು ಪ್ರಾಂತದೊಂದಿಗೆ 1956ರಲ್ಲಿ ವಿಲೀನಗೊಳಿಸಿದ ಕ್ರಿಯೆಯಿಂದಾಗಿ ಮೈಸೂರು ರಾಜ್ಯ ರೂಪುಗೊಂಡಿತು. ಆ ವರ್ಷ ಸಂವಿಧಾನಾತ್ಮಕ ಸರ್ಕಾರ ಅಸ್ತಿತ್ವಕ್ಕೆ ಬಂದು ತನ್ನ ಆಡಳಿತವನ್ನು ಆರಂಭಿಸಿತು. ಮೈಸೂರು ರಾಜ್ಯ ಕರ್ನಾಟಕವಾಗಿ ಪರಿವರ್ತನೆಯಾದದ್ದು 1973ರ ನವೆಂಬರ್ 1 ರಂದು. ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರ ಅವಧಿಯಲ್ಲಿ. ಕನ್ನಡ ನಾಡು ಕರ್ನಾಟಕ ಎಂದು ನಾಮಕರಣಗೊಂಡು ಈ ವರ್ಷಕ್ಕೆ ಐವತ್ತು ತುಂಬುತ್ತದೆ. ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣಗೊಂಡ ಸುವರ್ಣ ಸಂಭ್ರಮಕ್ಕೆ ರಾಜ್ಯ ಸರ್ಕಾರ ಸಿದ್ಧವಾಗುತ್ತಿದೆ. ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಮಹತ್ವ ಪ್ರಚುರಪಡಿಸುವ ವಿಶೇಷ ಕಾರ್ಯಕ್ರಮಗಳನ್ನು ವರ್ಷವಿಡೀ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ವ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಆಯವ್ಯಯದಲ್ಲಿ ಹಣ ಮೀಸಲಿಡಲು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಬೇಡಿಕೆ ಸಲ್ಲಿಸಲಿದ್ದಾರೆ.

ಕರ್ನಾಟಕಕ್ಕೆ 50 ತುಂಬಿದ ಸಂದರ್ಭದಲ್ಲೇ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದ ಸಿದ್ಧರಾಮಯ್ಯ ಈಗ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. 2013 ರಿಂದ 2018ರ ವರೆಗೆ ಮುಖ್ಯಮಂತ್ರಿಯಾಗಿದ್ದಾಗ, ಕನ್ನಡದ ಅಸ್ಮಿತೆಯನ್ನು ಸಿದ್ಧರಾಮಯ್ಯ ಎತ್ತಿ ಹಿಡಿದಿದ್ದರು. ನೆನೆಗುದಿಗೆ ಬಿದ್ದಿದ್ದ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡು ಅವುಗಳಿಗೆ ತಾರ್ಕಿಕ ಅಂತ್ಯ ಕಾಣಿಸಲು ಶತಾಯಗತಾಯ ಪ್ರಯತ್ನಿಸಿದರು. ದೇಶದಲ್ಲಿಯೇ ಮೊದಲಬಾರಿಗೆ ರಾಜ್ಯಕ್ಕೆ ಪ್ರತ್ಯೇಕದ ಧ್ವಜದ ಕಲ್ಪನೆಯನ್ನು ಮುಂದುಮಾಡಿ, ಅದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒಕ್ಕೂಟ ವ್ಯವಸ್ಥೆಯಡಿಯಲ್ಲಿ ಸಾಂವಿಧಾನಾತ್ಮಕ ಅಸ್ತಿತ್ವ ತಂದುಕೊಡಲು ಪ್ರಯತ್ನಿಸಿದರು. ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಕನ್ನಡದ ಅಸ್ಮಿತೆಯ ವಿಷಯಕೂಡ ಚುನಾವಣೆಯ ಕೇಂದ್ರ ವಿಷಯ ಸೂಚಿಯಾಗಿತ್ತು. ರಾಷ್ಟ್ರೀಯತೆ, ಹಿಂದುತ್ವದ ರಾಜಕಾರಣ ಮಾಡುತ್ತಿರುವ ಆರೋಪ ಹೊತ್ತ ಬಿಜೆಪಿಗೆ, ಕನ್ನಡನಾಡು-ನುಡಿ ಸಂಸ್ಕೃತಿಯನ್ನು ಮುಂದುಮಾಡಿದ ಕಾಂಗ್ರೆಸ್ ಪಕ್ಷ ಗೆದ್ದು ಈಗ ಅಧಿಕಾರಕ್ಕೆ ಬಂದಿದೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕನ್ನಡದ ನಾಡು-ನುಡಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತೆ ಮುನ್ನೆಲೆಗೆ ಬಂದಿದೆ. ಕೇಂದ್ರ ಸರ್ಕಾರದ ನೇಮಕಾತಿಗಳಲ್ಲಿ ಹಿಂದಿ ಹೇರಿಕೆ, ಕೇಂದ್ರದ ಸಾಮ್ಯದಲ್ಲಿರುವ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ-ಅವಕಾಶ ಸೇರಿದಂತೆ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡದ ನಾಡು-ನುಡಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಜಬಾಬ್ದಾರಿ ಸಿದ್ದರಾಮಯ್ಯ ಸರ್ಕಾರದ ಮೇಲಿದೆ.

ಬಿಜೆಪಿ ಆಡಳಿತದಲ್ಲಿ ಹಿಂದಿ ಹೇರಿಕೆಯನ್ನು ಹಲ್ಲುಕಚ್ಚಿ ಸಹಿಸಿಕೊಂಡಿದ್ದ ಕನ್ನಡಿಗರು, ಕನ್ನಡಪರ ಸಂಸ್ಥೆಗಳು ತಮ್ಮ ಬೇಡಿಕೆಪಟ್ಟಿಯನ್ನು ಸಿದ್ದಮಾಡಿಕೊಂಡು ಸಿದ್ದರಾಮಯ್ಯನವರ ಮುಂದಿಟ್ಟಿವೆ. ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸರಂಗ ಕನ್ನಡಿಗರ ನಿರೀಕ್ಷೆಗಳನ್ನು ಸರ್ಕಾರದ ಮುಂದಿಟ್ಟಿವೆ.

ಕನ್ನಡಿಗರಿಗೆ ಉದ್ಯೋಗ-ಪರಿಷ್ಕೃತ ಮಹಿಷಿ ವರದಿ

ಪರಿಷ್ಕೃತ ಡಾ. ಸರೋಜನಿ ಮಹಿಷಿಯನ್ನು ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆದರೆ, ಕೇಂದ್ರವು ಅನುಷ್ಠಾನಗೊಳಿಸಬೇಕಾದ ಅಂಶಗಳಿಗಾಗಿ ಆಗ್ರಹಿಸಲು ರಾಜ್ಯ ಸರ್ಕಾರಕ್ಕೆ ಸಾಂವಿಧಾನಿಕ ಹಾಗೂ ನೈತಿಕ ಬಲಬರುತ್ತದೆ ಎನ್ನುತ್ತಾರೆ ಮಹಿಷಿ ವರದಿ ಪರಿಷ್ಕರಣ ಸಮಿತಿ ಸದಸ್ಯ ರಾ. ನಂ. ಚಂದ್ರಶೇಖರ್. ಸರೋಜಿನಿ ಮಹಿಷಿ ವರದಿಯ ಮಹತ್ವವನ್ನು ಅರಿತಿದ್ದ ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾಗಿದ್ದಾಗ ಪರಿಷ್ಕರಣ ಸಮಿತಿಯೊಂದನ್ನು ರಚಿಸಿ, ಅದರ ವರದಿಯನ್ನು ಪಡೆದುಕೊಂಡಿದ್ದರು. ಆದರೆ ವರದಿಯನ್ನು ಸದನದಲ್ಲಿ ಮಂಡಿಸಲು ಸಾಧ್ಯವಾಗಲಿಲ್ಲ. ಈಗ ಕಾಲ ಕೂಡಿ ಬಂದಿದೆ ಎನ್ನುತ್ತಾರೆ ಕರ್ನಾಟಕ ವಿಕಾಸರಂಗದ ಅಧ್ಯಕ್ಷರಾದ ವ.ಚ. ಚನ್ನೇಗೌಡ. ಕರ್ನಾಟಕದ ಉದ್ಯೋಗ ಕನ್ನಡಿಗರಿಗೇ ಎನ್ನುವ ಹಂಬಲ ಇನ್ನೂ ತೀರಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ 2008ರಿಂದ ’ಸ್ಥಳೀಯರಿಗೆ ಉದ್ಯೋಗ ರಾಷ್ಟ್ರೀಯ ನೀತಿಯಾಗಲಿ’ ಎಂದು ಪ್ರತಿಪಾದಿಸುತ್ತಿದೆ. ಇದನ್ನು ರಾಜ್ಯ ಸರ್ಕಾರ ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕಾಗಿದೆ ಎನ್ನುವುದು ಕನ್ನಡ ಗೆಳೆಯರ ಬಳಗದ ಬಾ.ಹ. ಉಪೇಂದ್ರ ಅವರ ಅಭಿಪ್ರಾಯ.

ಕನ್ನಡದ ಶಾಸ್ತ್ರೀಯ ಸ್ಥಾನಮಾನ

ಕೇಂದ್ರ ಸರ್ಕಾರವು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿ ಹದಿನೈದು ವರ್ಷಗಳೇ ಕಳೆದಿದ್ದರೂ, ಆ ಸಂಸ್ಥೆಗೆ ಸಿಕ್ಕಬೇಕಾದ ಸ್ಥಾನಮಾನಗಳನ್ನು ಪಡೆದುಕೊಳ್ಳಲು ಇದುವರೆಗೆ ಸಾಧ್ಯವಾಗಿಲ್ಲ. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಸ್ವಾಯತ್ತ ಸಂಸ್ಥೆಯಾಗಬೇಕಿದೆ. ಶಾಸ್ತ್ರೀಯ ಸ್ಥಾನಮಾನ ತಂದುಕೊಡುವ ಅನುದಾನವನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಲು ರಾಜ್ಯ ಸರ್ಕಾರ ಸರಿಯಾದ ದಿಕ್ಕಿನಲ್ಲಿ ಪ್ರಯತ್ನ ನಡೆಸುತ್ತಿಲ್ಲ ಎನ್ನುವುದು ಲೇಖಕ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ದೊಡ್ಡರಂಗೇಗೌಡ ಅವರ ಅನಿಸಿಕೆ.

ಈಗಾಗಲೇ ಸದನದ ಒಪ್ಪಿಗೆ ಪಡೆದಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ರಲ್ಲಿ ಕನ್ನಡಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳೂ ಅಡಕವಾಗಿದ್ದರೂ, ಕಾಯಿದೆಯಲ್ಲಿ ಸ್ಪಷ್ಟತೆ ಇಲ್ಲ. ಕನ್ನಡ ಅನುಷ್ಠಾನದ ಬಗ್ಗೆ ಆಳವಾದ ಸಮಗ್ರ ದೃಷ್ಟಿಯಿಲ್ಲದ ಅಂಶಗಳಿವೆ. ಇದೆಲ್ಲಕ್ಕಿಂತ ಅಪಾಯಕಾರಿ ಅಂಶವೆಂದರೆ ಕನ್ನಡಿಗರಿಗೆ ಉದ್ಯೋಗದ ಮೀಸಲಾತಿಗೆ ಸಂಬಂಧಿಸಿದ ಅಂಶ. ರಾಜ್ಯ ಸರ್ಕಾರದ ವಿನಾಯತಿ ಪಡೆಯುವ ಉದ್ಯಮಗಳಿಗೆ ಮಾತ್ರ ಕಾನೂನನ್ನು ಸೀಮಿತಗೊಳಿಸಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕದ ಕರಡನ್ನು ಸಿದ್ಧಪಡಿಸಿ ಮತ್ತೆ ಮಂಡಿಸಬೇಕೆಂಬುದು ಕನ್ನಡಿಗರ ಒತ್ತಾಯ.

ಸರ್ಕಾರದಿಂದ ಶಿಕ್ಷಣ, ಉದ್ಯೋಗ, ಆಡಳಿತ-ಈ ಮೂರು ಕ್ಷೇತ್ರಗಳಲ್ಲಿ ಕನ್ನಡಪರ ಕೆಲಸ ಆಗಬೇಕಿದೆ. ರಾಜ್ಯದ ಪಠ್ಯಕ್ರಮ ಶಾಲೆಗಳಷ್ಟೇ ಅಲ್ಲದೆ ಕೇಂದ್ರ ಪಠ್ಯಕ್ರಮದಲ್ಲೂ ಕನ್ನಡ ಒಂದು ಭಾಷೆಯಾಗಿ ಕಡ್ಡಾಯವಾಗಬೇಕು ಎನ್ನುವುದು ಲೇಖಕ, ಚಲನಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಅನಿಸಿಕೆ. ಇವುಗಳನ್ನು ಹೊರತುಪಡಿಸಿಯೂ, ನಾಡು-ನುಡಿ, ನೆಲ, ಜಲ, ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಸಮಸ್ಯೆಯ ಪಟ್ಟಿ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗಳಿಂದ ಸಿದ್ಧವಾಗಿದೆ. ಈ ಪೈಕಿ ಬಹುಮುಖ್ಯ ಬೇಡಿಕೆಗಳನ್ನಾದರೂ ವನ್ನೂ, ಕರ್ನಾಟಕದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಡೇರಿಸುವರೆಂಬ ನಂಬಿಕೆ ನಮಗಿದೆ ಎನ್ನುತ್ತಾರೆ, ರಾ. ನಂ. ಚಂದ್ರಶೇಖರ್.

Tags:    

Similar News