Prakash raj
x
Prakash Raj took a break from shooting films for four to five months because he was busy giving final touches to his dream Incubator Theatre project.

ಅಲ್ಪ ವಿರಾಮದ ನಂತರ ಮತ್ತೆ ಸಿನಿಮಾದತ್ತ ಪ್ರಕಾಶ್ ರಾಜ್


(After a 5-month hiatus, Prakash Raj returns to cinema. The actor is now busy, with Kannada, Tamil, Telugu and Hindi projects on hand. He is excited about Cheeku, a Hindi web series, and a French film on the Sri Lanka crisis. He is also engaged in promoting Photo, a Kannada film on the Covid-19 crisis. In this exclusive interview with The Federal, Prakash Raj shared his thoughts on his engagement with the theatre, and writing, among other things.)

Read it in English: Prakash Raj on encouraging new directors, his break from cinema, upcoming films

ಸಿನಿಮಾದಿಂದ ಅಲ್ಪ ಕಾಲದ ವಿರಾಮ ತೆಗೆದುಕೊಂಡಿದ್ದ ಬಹುಭಾಷಾ ಕಲಾವಿದ ಪ್ರಕಾಶ್ ರಾಜ್ (ಕನ್ನಡ ಪ್ರೇಕ್ಷಕರ ಮಟ್ಟಿಗೆ ಇನ್ನೂ ಪ್ರಕಾಶ್ ರೈ) ಮತ್ತೆ ಚಿತ್ರರಂಗಕ್ಕೆ ಹಿಂದಿರುಗಿದ್ದಾರೆ. ಅವರಿಗೀಗ ಕೈ ತುಂಬಾ ಚಿತ್ರಗಳು. ಇನ್ನಷ್ಟು ಅವಕಾಶಗಳು ಕೈ ಬೀಸಿ ಕರೆಯುತ್ತಿವೆ.

ಕನ್ನಡ, ತಮಿಳು, ತೆಲುಗು, ಹಿಂದಿ ಚಲನಚಿತ್ರಗಳು ಹಾಗೂ ವೆಬ್ ಸೀರೀಸ್ಗಳಲ್ಲಿ ಅವರೀಗ ಕಾರ್ಯಮಗ್ನ ಎಂದರೆ ತಪ್ಪಾಗಲಾರದು. ಈ ನಡುವೆ ಕನ್ನಡ ಚಿತ್ರರಂಗದಲ್ಲಿ ಹೊಸಬರು ನಡೆಸುತ್ತಿರುವ ಸಿನಿ-ಪ್ರಯೋಗಗಳಿಗೆ ಅವರು ಮನಸೋತಿದ್ದಾರೆ. ಉತ್ಸವ ಗೋಣ್ವಾರ್ ಅವರು ನಿರ್ದೇಶಿಸಿರುವ ಫೋಟೋ ಎಂಬ ತೊಂಭತ್ತೇಳು ನಿಮಿಷದ ಚಿತ್ರ ಅವರನ್ನು ತೀವ್ರವಾಗಿ ಕಲುಕಿದ್ದು, ಅದನ್ನು ವಿಶ್ವಮಟ್ಟಕ್ಕೆ ತಲುಪಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಚಿತ್ರ ಕಳೆದ ಮಾರ್ಚಿ ತಿಂಗಳಲ್ಲಿ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ (ಬಿಫೆಸ್)ನ ಕನ್ನಡ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ. ಜಗತ್ತಿನ ವಿವಿಧ ದೇಶಗಳಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಸ್ಪರ್ಧಾ ವಿಭಾಗಗಳಲ್ಲಿ ಭಾಗವಹಿಸಲು ಸಜ್ಜಾಗಿದೆ. ಉತ್ಸವ್ ಅವರ ಚೊಚ್ಚಲು ಚಿತ್ರವನ್ನು ಜಗತ್ತಿನ ಮೂಲೆಮೂಲೆಗಳ ಚಿತ್ರ ಪ್ರಿಯರಿಗೆ ತೋರಿಸಲು ಪ್ರಕಾಶ್ ಟೊಂಕಕಟ್ಟಿ ನಿಂತಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಸೂರಿ ನಿರ್ದೇಶಿಸುತ್ತಿರುವ ಬಘೀರ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಪ್ರಕಾಶ್ ರಾಜ್ ಅವರು, ತಾವು ನಟಿಸುತ್ತಿರುವ ಚಿತ್ರಗಳು, ತಮ್ಮ ರಂಗಭೂಮಿಯ ಕನಸುಗಳು, ತಮ್ಮ ಬರವಣಿಗೆ ಕೃಷಿ ಹಾಗೂ ದೇಶದ ಪ್ರಸಕ್ತ ರಾಜಕಾರಣ ಇತ್ಯಾದಿ ಸಂಗತಿಗಳ ಕುರಿತು ದ ಫೆಡರಲ್ನೊಂದಿಗೆ ಮಾತನಾಡಿದರು.

ಫೋಟೋ ಆವರಿಸಿಕೊಂಡ ಬಗ್ಗೆ

ಪ್ರಕಾಶ್ ರಾಜ್ ಅವರನ್ನು ಫೋಟೋ ಚಿತ್ರ ಸಂಪೂರ್ಣವಾಗಿ ಆವರಿಸಿಕೊಂಡಂತಿತ್ತು. ಅವರು ಚಿತ್ರದ ನಿರ್ದೇಶಕ ಉತ್ಸವ ಅವರನ್ನು ಪರಿಚಯಿಸಿದರು. ಬಿಫೆಸ್ನಲ್ಲಿ ಐವತ್ತಕ್ಕೂ ಹೆಚ್ಚು ಕನ್ನಡ ಚಿತ್ರಗಳು ಪ್ರದರ್ಶನಗೊಂಡಿದ್ದರೂ, ಫೋಟೋ, ಈ ಕಲಾವಿದನನ್ನು ಕಾಡಿ ಆವರಿಸಿಕೊಂಡಿದ್ದೇಕೆ?

ಈ ಹುಡುಗ ರಾಯಚೂರು ಜಿಲ್ಲೆಯ ಗೋಣ್ವಾರ್ನಿಂದ ಬಂದವರು. ಕಳೆದ ಏಳು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಪತ್ರಿಕೆಯೊಂದರಲ್ಲಿ ಕೋವಿಡ್ ಪ್ರಕೋಪದ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಕುರಿತು ಪ್ರಕಟವಾದ ಲೇಖನದಿಂದ ಪ್ರೇರೇಪಿತರಾಗಿ ಚಿತ್ರಕತೆ ಬರೆದು ಫೋಟೋ ನಿರ್ದೇಶಿಸಿದ್ದಾರೆ. ಕಳೆದ ವರ್ಷ ನನಗೆ ಕರೆ ಮಾಡಿ ಚಿತ್ರವನ್ನು ನೋಡಬೇಕೆಂದು ಕೋರಿದರು. ನನ್ನ ಚಿತ್ರರಂಗದ, ರಂಗಭೂಮಿಯ ಸಾಹಿತ್ಯಲೋಕದ ಗೆಳೆಯರೂ ಈ ಚಿತ್ರದ ಬಗ್ಗೆ ಮೆಚ್ಚಿಗೆಯ ಮಾತುಗಳನ್ನಾಡಿದ್ದರು. ಆದರೆ ನಾನು ನನ್ನದೇ ಕೆಲಸಗಳಲ್ಲಿ ಮಗ್ನನಾಗಿದ್ದರಿಂದ ಚಿತ್ರ ನೋಡಲು ಸಾಧ್ಯವಾಗಿರಲಿಲ್ಲ. ನಾನು ಸಿನಿಮಾದಿಂದ ಬಿಡುವು ಪಡೆದು, ಶ್ರೀರಂಗಪಟ್ಟಣದ ಬಳಿಯ ಲೋಕಪಾವನಿ ನದಿ ತೀರದ ಕೆ. ಶೆಟ್ಟಿಹಳ್ಳಿಯಲ್ಲಿರುವ ನನ್ನ ತೋಟಕ್ಕೆ ಅಂಟಿಕೊಂಡಂತೆ ಇರುವ ಪ್ರದೇಶದಲ್ಲಿ ನಿರ್ದಿಗಂತ ಎಂಬ ರಂಗಭೂಮಿಯ ಕಾವು ಗೂಡು (ಇನ್ಕ್ಯುಬೇಟರ್ ಥಿಯೇಟರ್) ಕಟ್ಟುವ ಪ್ರಕ್ರಿಯೆಯಲ್ಲಿ ಮಗ್ನನಾಗಿದ್ದಾಗ, ಉತ್ಸವ್ ಮತ್ತೆ ನನ್ನನ್ನು ಭೇಟಿಯಾಗಿ ಫೋಟೋ ನೋಡುವಂತೆ ಕೇಳಿದರು. ನಾನು ನಿರ್ದಿಗಂತದಲ್ಲಿ ಚಿತ್ರ ನೋಡಿದೆ. ನನ್ನೊಂದಿಗೆ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಅವರೂ ಸೇರಿದಂತೆ ಚಿತ್ರರಂಗದ, ರಂಗಭೂಮಿಯ ಹಲವರು ಚಿತ್ರವನ್ನು ವೀಕ್ಷಿಸಿದರು. ಚಿತ್ರ ನೋಡಿದ ನಂತರ ನನ್ನನ್ನು ಮೊದಲು ಕಾಡಿದ ಪ್ರಶ್ನೆಯೆಂದರೆ; ಈ ಮೊದಲೇ ನಾನೇಕೆ ಈ ಚಿತ್ರವನ್ನು ನೋಡಲಿಲ್ಲ? ನನ್ನ ಕಣ್ಣುಗಳು ನನಗರಿವಿಲ್ಲದಂತೆಯೇ ತೇವಗೊಂಡವು. ಆಗ ಅನ್ನಿಸಿದ್ದು, ಈ ಚಿತ್ರವನ್ನು ಜಗತ್ತಿನ ಮೂಲೆಮೂಲೆಯ ಸಿನಿಮಾ ಪ್ರೀತಿಯ ಮಂದಿಗೆ ತೋರಿಸಬೇಕು. ಹಾಗಾಗಿ ನಿರ್ದಿಗಂತದ ಮೂಲಕವೇ ಈ ಚಿತ್ರವನ್ನು ಪ್ರೋತ್ಸಾಹಿಸಬೇಕೆಂಬ ತೀರ್ಮಾನಕ್ಕೆ ಬಂದೆ.. ಹೀಗೆ ಕಥೆಯಂತೆ ಚಿತ್ರ ಕಾಡಿದ ಬಗೆಯನ್ನು ವಿವರಿಸಿ ದೀರ್ಘ ಶ್ವಾಸವೆಳೆದುಕೊಂಡರು.

ಹೃದಯ ಕಲಕುವ ಕೋವಿಡ್ ಕಥನ

ಹಾಗಾದರೆ ಫೋಟೋ ಕಥೆಯಾದರೂ ಏನು? ಕೋವಿಡ್ ಸಾಂಕ್ರಾಮಿಕದ ಆರಂಭದ ಹಂತದಲ್ಲಿ ನಡೆಯುವ ಕಥೆ ಇದು. ಕೋವಿಡ್ ಸಾಂಕ್ರಾಮಿಕದ ಆರಂಭಿಕ ಹಂತದಲ್ಲಿ ನಡೆದ ಕಥೆ ಇದು. ಬೆಂಗಳೂರಿನಿಂದ ನಾನೂರೈವತ್ತು ಕಿಲೋಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿಯಿಂದ ಕೂಲಿ ಹುಡುಕಿಕೊಂಡು ಬಂದ ದಿನಗೂಲಿಯೊಬ್ಬ ತನ್ನ ಪುಟ್ಟ ಮಗನನ್ನು ಎದೆಗವಚಿಕೊಂಡು ಅನುಭವಿಸಿದ ಯಾತನೆಯ ದೃಶ್ಯರೂಪವಿದು. ನಗರದ ಷೆಡ್ ಒಂದರಲ್ಲಿ ಆಸರೆ ಪಡೆಯುವ ಈ ದಿನಗೂಲಿ ಕಾರ್ಮಿಕ ಸಾಂಕ್ರಾಮಿಕ ರೋಗ ಸುನಾಮಿಯಂತೆ ಹಬ್ಬುತ್ತಿರುವುದರಿಂದ ಆತಂಕಗೊಂಡಿದ್ದಾನೆ. ನಗರದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಇನ್ನು ಇಲ್ಲಿರುವುದು ಅಸಾಧ್ಯವೆನ್ನಿಸಿದಾಗ ತನ್ನೂರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದಾನೆ. ಈ ನಡುವೆ ಆ ಪುಟ್ಟ ಪೋರನಿಗೆ ರಾಜ್ಯದ ಶಕ್ತಿ ಕೇಂದ್ರ ಹಾಗೂ ಜನಪರ ಶಾಸನಗಳನ್ನು ರೂಪಿಸುವ ಹೃದಯ ಸ್ವರೂಪಿ ವಿಧಾನ ಸೌಧದ ಮುಂದೆ ನಿಂತು ತನ್ನದೊಂದು ಫೋಟೋ ಕ್ಲಿಕ್ಕಿಸಿಕೊಂಡು ತನ್ನ ಗೆಳೆಯರ ಬಳಿ ಗತ್ತು ತೋರಿಸುವ ಹೆಬ್ಬಯಕೆ. ಆದರೆ ಅದು ಸಾಧ್ಯವೇ? ಕಾಲ್ನಡಿಗೆಯ ಪಯಣ ಆರಂಭವಾಗಿದೆ. ಸುದೀರ್ಘ ಪಯಣ. ಕಠಿಣ ಹವಾಮಾನ. ಇವಲ್ಲ ಒಟ್ಟಾಗಿ ಅವರ ಜೀವ-ಜೀವನ ಎರಡನ್ನೂ ನುಂಗಿನೊಣೆಯುತ್ತದೆ. ಇಂಥ ಹೃದಯ ವಿದ್ರಾವಕ ಕಥನ ಸೂಕ್ಷ್ಮ ಮನಸ್ಸಿನ ಕಲಾವಿದ ಪ್ರಕಾಶ್ ರಾಜ್ರನ್ನು ಕಲುಕದಿರಲು ಸಾಧ್ಯವೇ?

ವೆಟ್ರಿಮಾರನ್ ನೆರವು

ಕಲುಕಿ, ಮನಕದಡಿದ ಕಾರಣಕ್ಕೆ ಈ ಚಿತ್ರದ ಬೆನ್ನೆಲುಬಾಗಿ ನಿಂತು, ಅದನ್ನು ಹೆಗಲಮೇಲೆ ಹೊತ್ತು ನಿಂತಿದ್ದಾರೆ ಪ್ರಕಾಶ್ ರಾಜ್. ತಾವಷ್ಟೇ ಅಲ್ಲದೆ ಫೋಟೋವನ್ನು ಬೆಂಬಲಿಸುವಂತೆ ಚಿತ್ರರಂಗದ ತಮ್ಮ ಎಲ್ಲ ಗೆಳೆಯರಿಗೂ ಮನವಿ ಮಾಡಿದ್ದಾರೆ. ವೆಟ್ರಿಮಾರನ್ ಚಿತ್ರದ ಕಥೆ ಕೇಳಿ ರೋಮಾಂಚಿತರಾಗಿದ್ದಾರೆ. ತಮ್ಮ ಕೈಲಾದ ಎಲ್ಲ ಬೆಂಬಲವನ್ನೂ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ ಎಂದು ಹೇಳುವಾಗ, ಈ ನಟನ ಮುಖದಲ್ಲಿ ನೆಮ್ಮದಿಯ ಮಂದಹಾಸ.

ಕನ್ನಡದ ಮೂರು ಚಿತ್ರಗಳಲ್ಲದೆ ಪವನ್ ಕಲ್ಯಾಣ್ ಮತ್ತು ಧನುಷ್ ಜೊತೆಯಲ್ಲಿ ತೆಲುಗು ಹಾಗೂ ತಮಿಳಿನ ಚಿತ್ರಗಳಲ್ಲಿ ಅವರೀಗ ಮಗ್ನ. ವೆಟ್ರಿಮಾರನ್ ನಿರ್ದೇಶಿಸಿದ ವಿಡುದಲೈ ಮೊದಲ ಭಾಗದಲ್ಲಿ ನಾನು ವಿಜಯ್ ಸೇತುಪತಿಗೆ ಜೊತೆಯಾಗಿ ಅಭಿನಯಿಸಿದ್ದೇನೆ. ಅದರ ಮುಂದುವರಿದ ಭಾಗದಲ್ಲಿ ನನ್ನ ಪಾತ್ರ ಮಹತ್ವದ್ದು. ನನಗೆ ಕರೆ ಮಾಡಿದ ಮೆನನ್, ನಿಮ್ಮ ಪಾತ್ರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದಾಗ ನನ್ನ ಉತ್ಸಾಹ ಮತ್ತಷ್ಟು ಹೆಚ್ಚಿದೆ, ಎನ್ನುವ ಪ್ರಕಾಶ್ರಾಜ್ರನ್ನು ವಿಡುದಲೈ ಗುಂಗಿನಿಂದ ಹೊರತರಬೇಕಾದರೆ, ಅವರ ಮುಂದಿರುವ ಯೋಜನೆಗಳತ್ತ ಗಮನ ಸೆಳೆಯಬೇಕಾಯಿತು.

ಈ ಬಹುಭಾಷಾ ಬಹುಮುಖ ಪ್ರತಿಭೆಯ ನಟನ ಮನಸ್ಸು ಈಗ ತಮ್ಮ ಮುಂದಿರುವ ಒಂದು ಫ್ರೆಂಚ್ ಚಿತ್ರ ಹಾಗೂ ಮತ್ತೊಂದು ವೆಬ್ ಸೀರೀಸ್ನಲ್ಲಿ ತಲ್ಲೀನವಾಗಿದೆ. ಈ ವೆಬ್ ಸೀರೀಸ್ ಚೀಕು. ಇದೊಂದು ಈ ಕಾಲಘಟ್ಟದ ಚಿತ್ರ. ಈ ಚಿತ್ರದಲ್ಲಿ ನನ್ನದು ಮಹತ್ವದ ಪಾತ್ರ. ಇದರಲ್ಲಿ ಇಪ್ಪತ್ನಾಲ್ಕು ವರ್ಷದ ಮಗ ಮತ್ತು ತಂದೆಯ ನಡುವಿನ ತಲೆಮಾರು ಕಂದರದಿಂದಾಗಿ ನಡೆಯುವ ಸಂಘರ್ಷದ ಕಥೆ ಇದು. ಕಥೆಯ ವಿನ್ಯಾಸ ತೀರಾ ಅಸಂಪ್ರದಾಯಿಕ ರೀತಿಯದು. ಆದರೆ ನೆಲದಾಳಕ್ಕಿಳಿದ ಬೇರಿನಂತೆ ನೆಲದ ಮಣ್ಣಿನ ವಾಸನೆಯ ಕಥನವಿದು, ಎಂದು ಶೂನ್ಯದತ್ತ ದೃಷ್ಟಿ ನೆಟ್ಟರು.

ಮತ್ತೆ ವಾಸ್ತವಕ್ಕೆ ತಿರುಗಿ ಫ್ರೆಂಚ್ ಚಿತ್ರದ ಕುರಿತು ವಿವರಣೆ. ಪ್ಯಾರಿಸ್ನಲ್ಲಿ ನೆಲೆಸಿರುವ ತಮಿಳು ಮೂಲದ ಶ್ರೀಲಂಕಾದ ಜಾಫ್ನಾ ನೆಲದ ಒಂದಷ್ಟು ಹುಡುಗರು ತಮ್ಮ ಜಾಫ್ನಾ ಬದುಕಿನ ದಿನಗಳನ್ನು ಕುರಿತು ಚಿತ್ರ ಮಾಡುತ್ತಿದ್ದಾರೆ. ಪ್ಯಾರಿಸ್ನಲ್ಲಿದ್ದರೂ ಜಾಫ್ನಾ ಅವರನ್ನು ಬಿಡದೆ ಕಾಡುತ್ತಿದೆ. ಅವರು ಹೇಳಿದ ಕಥೆಯನ್ನು ಕೇಳಿದಾಗ ನನಗೆ ರೋಮಾಂಚನವಾಯಿತು. ಏಕೆಂದರೆ ನಾನು ಈಗಾಗಲೇ ಶ್ರೀಲಂಕಾದ ಜನಾಂಗೀಯ ಸಂಘರ್ಷದ ಮಣಿರತ್ನಂ ಅವರ ಕನ್ನತ್ತಿಲ್ ಮುತ್ತಮಿಟ್ಟಲ್ ಚಿತ್ರದಲ್ಲಿ ಹೆರಾಲ್ಡ್ ವಿಕ್ರಮ್ಸಿಂಘೇ ಪಾತ್ರದಲ್ಲಿ ಅಭಿನಯಿಸಿದ್ದೆ. ಈ ಹುಡುಗರು ಶ್ರೀಲಂಕಾದ ಸ್ಥಿತಿಯನ್ನು ತಮ್ಮ ತಲೆಮಾರಿನ ಕಣ್ಣಲ್ಲಿ ನೋಡುತ್ತಿದ್ದಾರೆ..

ಸಿನಿಮಾದಿಂದ ಬಿಡುವು ತೆಗೆದುಕೊಳ್ಳಲು ಕಾರಣ

ಇಷ್ಟಿದ್ದೂ ಸಿನಿಮಾದಿಂದ ನಾಲ್ಕೈದು ತಿಂಗಳು ಬಿಡುವು ತೆಗೆದುಕೊಂಡ ಕಾರಣ ಕೆಣಕಿದರೆ, ನನ್ನ ಹಲವು ಸೃಜನಶೀಲ ಯೋಚನೆಗಳಿಗೆ ಸಮಯ ನೀಡಬೇಕಿತ್ತು. ಐದು ವರ್ಷಗಳ ಹಿಂದೆ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದಾಗ ಹತ್ತು ತಿಂಗಳ ಬಿಡುವು ತೆಗೆದುಕೊಂಡಿದ್ದೆ. ಲೋಕಸಭಾ ಚುನಾವಣೆ ಮತ್ತೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಈ ಬಿಡುವನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ. ನಾನು ಚುನಾವಣಾ ರಾಜಕಾರಣದಿಂದ ದೂರವಿರಲು ನಿರ್ಧರಿಸಿದ್ದೇನೆ. ಹಾಗೆಯೇ ಸಾಮಾನ್ಯ ನಾಗರಿಕನಾಗಿ, ಮತದಾರನಾಗಿ ಹಕ್ಕಿನಿಂದ ಪ್ರಶ್ನೆ ಕೇಳುವುದನ್ನು ಮುಂದುವರೆಸಲು ನಿರ್ಧರಿಸಿದ್ದೇನೆ. ನಾನು ಶ್ರೀರಂಗಪಟ್ಟಣದ ಸಮೀಪದ ನನ್ನ ತೋಟವನ್ನು ಅಭಿವೃದ್ಧಿ ಪಡಿಸುವುದಿತ್ತು. ಅಲ್ಲಿ ಒಂದಷ್ಟು ಅಡಿಕೆ ಕೃಷಿ ಮಾಡುತ್ತಿದ್ದೇನೆ. ಹಾಗೆಯೇ ನನ್ನ ಬರವಣಿಗೆಯನ್ನು ಮುಂದುವರೆಸಲು ನಿರ್ಧರಿಸಿದ್ದೇನೆ. ಪ್ರಕೃತಿಯ ಜೊತೆಗಿನ ನನ್ನ ಸಂಬಂಧವನ್ನು ಶೋಧಿಸುವ ಬರಹಗಳು ಅವು. ನಾನು ಅಂಥ ಬರಹವನ್ನು ಕಾನ್ವರ್ಸೇಷನ್ ಅಥವ ಸಂವಾದ ಎಂದು ಹೆಸರಿಸುತ್ತೇನೆ. ಈಗಾಗಲೇ ಕನ್ನಡದಲ್ಲಿ ಅಂಕಣಗಳನ್ನು ಬರೆದು ನನ್ನ ಬರಹ ಪಳಗಿದೆ ಎಂದು ಪ್ರಕಾಶ್ ರಾಜ್ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತಾರೆ.

ಕಾವು ಗೂಡೆಂಬ ರಂಗ ಕಲ್ಪನೆ

ಮಾತನ್ನು ಮುಂದುವರೆಸಿ, ಹೆಚ್ಚಿನ ಕಾಲ ಕಳೆದದ್ದು ನಿರ್ದಿಗಂತ ಕಟ್ಟುವಲ್ಲಿ ಎನ್ನುತ್ತಾರೆ. ಏನಿದು ನಿರ್ದಿಗಂತ ಕುವೆಂಪು ನೆನಪಾಗುತಾರಲ್ಲ ಎಂದು ಪ್ರಶ್ನಿಸಿದರೆ; ರಂಗಭೂಮಿಯ ಹೊಸ ಪೀಳಿಗೆಯ ದಿಗಂತವನ್ನು ವಿಸ್ತರಿಸುವ ಯತ್ನ. ರಂಗಭೂಮಿ ನಿಧಾನವಾಗಿ ಕಳೆದುಕೊಳ್ಳುತ್ತಿರುವ ನಂಬಿಕೆಯನ್ನು ಉಳಿಸುವ ಸಣ್ಣ ಪ್ರಯತ್ನ. ಇದಕ್ಕಾಗಿ ನನ್ನ ಸ್ವಂತ ಸಂಪಾದನೆಯ ಹಣವನ್ನೇ ಮೀಸಲಿಟ್ಟಿದ್ದೇನೆ. ಈ ನಿರ್ದಿಗಂತದ ಮೇಲೆ ನನ್ನ ಕುಟುಂಬದವರಿಗೆ ಯಾವದೇ ಹಕ್ಕಿಲ್ಲ ಎಂದು ಆಗಲೇ ಸ್ಪಷ್ಟಪಡಿಸಿದ್ದೇನೆ. ನಿರ್ದಿಗಂತ ನಾಟಕ ಕಲಿಸುವ ಶಾಲೆಯಲ್ಲ. ಇಲ್ಲಿ ನಿರ್ದಿಷ್ಟ ಪಠ್ಯಕ್ರಮವಿಲ್ಲ. ಕಲಿತದ್ದನ್ನು ಸ್ವತಂತ್ರವಾಗಿ ವಿಸ್ತರಿಸುವ ಒಂದು ರೀತಿಯ ಬೆಚ್ಚಗಿನ ಗೂಡು. ಒಟ್ಟಾರೆಯಾಗಿ ರಂಗಭೂಮಿಗೆ ಘನತೆ ತಂದುಕೊಡುವ ಪ್ರಯತ್ನ ಇದು. ಇದೊಂದು ನನ್ನ ಹೊಸ ಕನಸು, ಹೊಸ ಪ್ರಯಾಣ. ಮುಂದಿನ ಎರಡು ವರ್ಷದಲ್ಲಿ ಫಲಿತಾಂಶ ನೀವು ನೋಡುತ್ತೀರಿ ಎಂದು ಪ್ರಕಾಶ್ ರಾಜ್ ನಿಧಾನವಾಗಿ ಹೆಜ್ಜೆ ಹಾಕಿದರು. ಅದೂ ಕೂಡ ಮತ್ತೊಂದು ಹುಡುಕಾಟದಂತಿತ್ತು.

Read More
Next Story